ಶೌಕತ್ ಅಲಿ, ಮೀರ್
	1920-76. ಹುದುಗು ಚಿತ್ರ (ಇನ್‍ಲೇ) ಮತ್ತು ಚಿತ್ರಕಲೆಯ ಪ್ರಸಿದ್ಧ ಕಲಾವಿದರು. 1920 ಆಗಸ್ಟ್ 12ರಂದು ಜನಿಸಿದರು. ಮೈಸೂರಿನ ಅನ್ವರ್ ಹುಸೇನ್ ಇವರ ತಂದೆ. ಮಗ ಓದಿ ಪದವೀಧರನಾಗಿ ಸರ್ಕಾರಿ ನೌಕರಿ ಮಾಡಬೇಕೆಂಬುದು ತಂದೆಯ ಆಸೆಯಾಗಿತ್ತು. ಶೌಕತ್ ಅಲಿ ಅವರು ಓದಿಗಿಂತ ಚಿತ್ರಕಲೆಯಲ್ಲಿ ಆಸಕ್ತಿ ತೋರಿದ್ದರಿಂದ ಮೈಸೂರಿನ ಚಾಮರಾಜೇಂದ್ರ ಕಲಾಶಾಲೆಗೆ ಸೇರಿಸಿದರು. ಇದೇ ಸಂದರ್ಭದಲ್ಲಿ ಇವರಿಗೆ ಕಸೂತಿಕಲೆಯಲ್ಲಿ ನಿಪುಣೆಯಾಗಿದ್ದ ತಾಯಿಯ ಪ್ರೋತ್ಸಾಹ ದೊರಕಿತು. ಇವರು ಶಾಲೆಯೊಳಗಿನ ಅಭ್ಯಾಸದ ಜೊತೆಗೆ ಪ್ರಕೃತಿಯ ಬೆಡಗನ್ನೂ ಪ್ರಾಣಿಪಕ್ಷಿಗಳನ್ನೂ ಸೂಕ್ಷ್ಮವಾಗಿ ಗಮನಿಸಿ ಅಭ್ಯಸಿಸಿ, ಅವುಗಳ ನಿಜಸ್ವರೂಪ, ವೈವಿಧ್ಯಮಯ ಬಣ್ಣಗಳನ್ನು ಮನನ ಮಾಡಿಕೊಂಡರು. ಹಾಗೇ ವರ್ಣಕಟ್ಟು ಮತ್ತು ಪ್ರಧಾನರೇಖೆಗಳ ಸಂಬಂಧಗಳನ್ನು ಗಮನಿಸಿದರು. ಮುಂದೆ ಸರ್ಕಾರಿ ವಿದ್ಯಾರ್ಥಿ ವೇತನ ಪಡೆದು ಮುಂಬಯಿಯ ಜೆ.ಜೆ. ಕಲಾಶಾಲೆಯಲ್ಲಿ ಅಭ್ಯಾಸ ಮಾಡಿ ಮೈಸೂರಿಗೆ ಹಿಂದಿರುಗಿ ಸ್ವತಂತ್ರ ಜೀವನ ನಡೆಸಲು ಪ್ರಾರಂಭಿಸಿದರು. 

	ಇವರು ರೇಖಾಚಿತ್ರದಲ್ಲಿ ಪ್ರಾವೀಣ್ಯತೆಗಳಿಸಿದ್ದಂತೆ ಹುದುಗುಚಿತ್ರ ನಿರ್ಮಾಣದಲ್ಲೂ ಸಾಕಷ್ಟು ಅಭ್ಯಾಸ ಮಾಡಿದ್ದರು. ತಮ್ಮ ಅನುಭವ ಮತ್ತು ಕಲ್ಪನೆಗಳನ್ನು ಮರದ ವಿವಿಧ ಬಣ್ಣಗಳ ತುಣುಕುಗಳನ್ನು ಕಲಾಪೂರ್ಣವಾಗಿ ಅಳವಡಿಸಿ ಜೀವ ತುಂಬುತ್ತಿದ್ದರು. ಹುದುಗುಚಿತ್ರಕಲಾ ವಿದರಾಗಿ ಮೈಸೂರಿನಲ್ಲಿ ಇವರು ಅಸೋಸಿಯೇಟೆಡ್ ಆಟ್ರ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅನೇಕರಿಗೆ ಮಾರ್ಗದರ್ಶಿಗಳಾದರು. ಇವರು ಕೆನರಾ ಬ್ಯಾಂಕಿನ ಡೈರೆಕ್ಟರುಗಳಲ್ಲಿ ಒಬ್ಬರಾಗಿದ್ದು ಕರಕುಶಲಕರ್ಮಿಗಳಿಗೆ ಆರ್ಥಿಕ ನೆರವು ದೊರೆಯುವಂತೆ ನೋಡಿಕೊಳ್ಳುತ್ತಿದ್ದರು. 

	ಅಪೂರ್ವವಾದ ಹುದುಗುಚಿತ್ರ ಕಲೆಯಲ್ಲಿ ವರ್ಣಚಿತ್ರದ ವೈಖರಿಯನ್ನು ತೋರಿಸಬಲ್ಲ ಕೀರ್ತಿ ಇವರದಾಗಿತ್ತು. ಇವರ ಕೃತಿಗಳಲ್ಲಿ ನಾವು ಕಾಣುವುದು ಸಹಜತೆಯನ್ನು. ಇವರ ಹಳ್ಳಿಯ ನೂರಾರು ದೃಶ್ಯಗಳಲ್ಲಿ ಅಲ್ಲಿನ ಸಹಜಸೌಂದರ್ಯ ಸುಂದರವಾಗಿ ಮೂಡಿಬಂದಿದೆ. ನೆಳಲು-ಬೆಳಕುಗಳ ವೈವಿಧ್ಯವನ್ನೂ ಆಕರ್ಷಕವಾಗಿ ಮೂಡಿಸುತ್ತಿದ್ದರು. ಇವರ ಉತ್ತಮ ಕೃತಿಗಳಲ್ಲಿ ಬಹು ಹೆಸರಾದವು ಹಳ್ಳಿ ಮದುವೆ, ಉಮರನ ಒಸಗೆ, ಹಾವಾಡಿಗ, ಮೀನುಗಾರ, ಹಳ್ಳಿಯ ಗಾಯಕ, ಕುರಿಯವನು, ಕುಕ್ಕೆ ಹೆಣೆಯುವವರ ಬಿಡಾರ, ನೀರು ತರುವ ವನಿತೆ, ಸ್ತ್ರೀರೂಪದ ಚಿತ್ರ, ನದಿಯ ದೃಶ್ಯವೊಂದರಲ್ಲಿ ಬಾತುಗಳನ್ನು ನೀರಿಗೆ ಬಿಡುತ್ತಿರುವ ವ್ಯಕ್ತಿಚಿತ್ರ ಹಾಗೂ ಅಲ್ಲಿನ ಪ್ರಕೃತಿ ಜೋಡಣೆ ಅಪೂರ್ವವಾದುವು. ಇವರ ಕೊನೆಯ ದಿನಗಳಲ್ಲಿ ಬಿಡಿಸಿದ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರ ರೂಪಚಿತ್ರಗಳು ಅಪರೂಪದ ಹುದುಗುಚಿತ್ರ ಕಲಾಕೃತಿಗಳು. ಇಲ್ಲಿ ಇವರು ಸ್ವಾಭಾವಿಕ ವರ್ಣಗಳ ಮರದ ತುಣುಕುಗಳಿಂದಲೇ ಆಕೃತಿಗಳನ್ನು ರಚಿಸಿ ತಮ್ಮ ಜಾಣ್ಮೆಯನ್ನು ತೋರಿದ್ದಾರೆ. ಕತ್ತರಿಸಿದ ಮರದಲ್ಲೇ ಆಕೃತಿಗಳನ್ನು ಕಂಡುಹಿಡಿಯುವ ಸೂಕ್ಷ್ಮತೆ, ಅಸ್ಪಷ್ಟವಾಗಿ ತೋರುವ ರೂಪಗಳಿಗೆ ತಮ್ಮ ಕಲ್ಪನೆಯ ರೇಖೆಗಳಿಂದ ಸಹಜಸೌಂದರ್ಯವನ್ನು ತುಂಬುವ ಜಾಣ್ಮೆ ಇವರದಾಗಿತ್ತು. ವಿದೇಶಿಯ ಕಲಾಭಿಮಾನಿಗಳೂ ಇವರ ಕಲೆಗೆ ಮಾರುಹೋಗಿದ್ದರು. ಸೋದರ ಕಲಾವಿದರ ಬಗ್ಗೆ, ಅವರ ಕೃತಿಗಳ ಬಗ್ಗೆ ಹೃದಯ ತುಂಬಿ ಸದಭಿಪ್ರಾಯ ವ್ಯಕ್ತಪಡಿಸುವ ದೊಡ್ಡ ಗುಣ ಇವರದಾಗಿತ್ತು. 

	ಇವರಿಗೆ ಕೇಂದ್ರ ಸರ್ಕಾರದ ಮಾಸ್ಟರ್ ಕ್ರಾಫ್ಟ್ಸ್‍ಮನ್ ಪ್ರಶಸ್ತಿಯೂ (1966) ರಾಜ್ಯ ಸರ್ಕಾರದ ಪ್ರಶಸ್ತಿಯೂ (1969) ಲಭ್ಯವಾಗಿದ್ದವು. ಇವರು 1976 ಅಕ್ಟೋಬರ್ 5ರಂದು ಮೈಸೂರಿನಲ್ಲಿ ನಿಧನರಾದರು.   
   
     		(ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ